ಭಾರತದಲ್ಲಿ ಸಮುದಾಯ ಅಭಿವೃದ್ಧಿ ಚಳವಳಿ

ಗ್ರಾಮೀಣ ಜನತೆಯನ್ನು ಸಂಘಟಿಸಿ ಸ್ವಯಂಸೇವೆ ಸ್ವಯಮಭಿವರ್ಧನೆ ಸ್ವಸಹಾಯ ಮುಂತಾದ ರಾಷ್ಟ್ರನಿರ್ಮಾಣ ಕಾರ್ಯಗಳಲ್ಲಿ ಪ್ರವರ್ತಿಸಿ ದೇಶವನ್ನು ಕಟ್ಟುವ ಯೋಜನೆ. ಸ್ವಾತಂತ್ರೋತ್ತರ ಭಾರತದಲ್ಲಿ ಸಮಗ್ರ ಅಭಿವೃದ್ಧಿಗೆ ಯೋಜನಾ ಪ್ರಕ್ರಿಯೆಯನ್ನು ಅವಲಂಬಿಸಲಾಗಿದೆ. ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿಗೆ ಮಹತ್ತ್ವ ಕೊಡುವುದು ಸ್ವಾಭಾವಿಕ. ಗ್ರಾಮಗಳ ಅಭಿವೃದ್ಧಿ ಸುಲಭದ ಮಾತಲ್ಲ. ಪ್ರತಿಯೊಂದು ಗ್ರಾಮವೂ ಹಲವಾರು ಶತಮಾನಗಳಿಂದ ಬೆಳೆದು ಬಂದ ಕೆಲವು ಮೌಲ್ಯಗಳ ಸಮುಚ್ಚಯ. ಸ್ವಾವಲಂಬನೆ, ಸಹಕಾರ ಮತ್ತು ಸ್ವಆಡಳಿತ ಈ ತತ್ತ್ವಗಳ ಆಧಾರದ ಮೇಲೆ ಗ್ರಾಮೀಣ ಸಮಾಜ ಬೆಳೆದು ಬಂದಿದೆ. ಆದರೆ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಅವರ ಆಡಳಿತ ನೀತಿಯಿಂದಾಗಿ ಗ್ರಾಮೀಣ ಸ್ವಾವಲಂಬನೆಗೆ ಸಂಚಕಾರ ಬಂತು. ಗ್ರಾಮದ ಸದೃಢ ಆರ್ಥಿಕ ಜೀವನದ ಆಧಾರ ಸ್ತಂಭಗಳಾಗಿದ್ದ ಕೃಷಿ ಮತ್ತು ಗ್ರಾಮಕೈಗಾರಿಕೆಗಳ ಪೈಕಿ ಒಂದು ಸ್ತಂಭವಾದ ಗ್ರಾಮಕೈಗಾರಿಕೆ ಕುಸಿದುಬಿತ್ತು. ಕೃಷಿಯ ಬೆಳೆವಣಿಗೆ ಕುಂಠಿತವಾಯಿತು. ಸರ್ಕಾರದ ಕಂದಾಯನೀತಿ ಮತ್ತು ನ್ಯಾಯಾಂಗ ಪದ್ಧತಿಯ ದೆಸೆಯಿಂದಾಗಿ ಗ್ರಾಮದ ಸ್ವಆಡಳಿತ ಪದ್ಧತಿ ಕ್ಷೀಣಿಸಿತು. ಶಿಕ್ಷಣ, ವೈದ್ಯ ಸೌಲಭ್ಯ ಹಾಗೂ ಉದ್ಯೋಗಾವಕಾಶಗಳು ಇಲ್ಲದಂತಾಗಿ ಪ್ರತಿಭಾವಂತ ಗ್ರಾಮೀಣ ಯುವಕರು ಇವನ್ನು ಹುಡುಕಿಕೊಂಡು ಪಟ್ಟಣದತ್ತ ಪಲಾಯನವಾಗುವ ಪ್ರವೃತ್ತಿ ಬೆಳೆದುಬಂತು. ಪರಿಣಾಮವಾಗಿ ಗ್ರಾಮಗಳ ಬಡತನ, ಅವಿದ್ಯೆ, ಅನೈರ್ಮಲ್ಯಗಳ ಬೀಡಾದುವು.

	ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದ ಕಾಲದಲ್ಲೇ ದೇಶದ ಪುನಾರಚನೆಯ ಬಗ್ಗೆ ಗಾಂಧೀಜಿ ಮತ್ತು ಇತರ ರಾಷ್ಟ್ರನಾಯಕರು ಚಿಂತಿಸಿದ್ದರು. ಗಾಂಧೀಜಿ ಆರಂಭಿಸಿದ ಹದಿನೆಂಟು ಅಂಶಗಳ ರಚನಾತ್ಮಕ ಕಾರ್ಯಕ್ರಮದಲ್ಲಿ ಸಮಗ್ರ ಗ್ರಾಮಾಭಿವೃದ್ಧಿ ಯೋಜನೆ ಅಡಕವಾಗಿತ್ತು. ಗಾಂಧೀಜಿ ಖುದ್ದಾಗಿ ಸೇವಾಗ್ರಾಮದ ಸುತ್ತಮುತ್ತಲ ಹಳ್ಳಿಗಳಲ್ಲಿ ಸಮಗ್ರ ಗ್ರಾಮಸೇವೆಯ ಕಾರ್ಯದಲ್ಲಿ ತೊಡಗುತ್ತಿದ್ದರು. ಹಾಗೆಯೇ ಸಹಸ್ರಾರು ರಚನಾತ್ಮಕ ಕಾರ್ಯಕರ್ತರು ಖಾದಿ, ಗ್ರಾಮೋದ್ಯೋಗ, ಶಿಕ್ಷಣ ಇತ್ಯಾದಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು. ರವೀಂದ್ರನಾಥ ಠಾಕೂರರು ಶಾಂತಿನಿಕೇತನ, ಶ್ರೀನಿಕೇತನಗಳನ್ನು ಕೇಂದ್ರವಾಗಿಟ್ಟುಕೊಂಡು ಗ್ರಾಮಭಾರತದ ನವನಿರ್ಮಾಣದ ಕಲ್ಪನೆಯನ್ನು ದೇಶದ ಮುಂದಿಟ್ಟಿದ್ದರು. ಸರ್ಕಾರದ ಅಧಿಕಾರದಲ್ಲಿದ್ದ ಕೆಲವು ಧೀಮಂತ ಅಧಿಕಾರಿಗಳು ಅಲ್ಲಲ್ಲಿ ಗ್ರಾಮ ಸಮುದಾಯಗಳ ಅಭಿವೃದ್ಧಿ ಸಾಧಿಸಲು ವಿಸ್ತರಣ ಸೇವಾಯೋಜನೆಗಳನ್ನು ಜಾರಿಗೆ ತಂದಿದ್ದರು. ಬರೋಡದ ಬಳಿ ವಿಸ್ತರಣಾಸೇವಾಯೋಜನೆ, ಉತ್ತರ ಪ್ರದೇಶದ ಎಟ್ಟಾವ ಸುತ್ತಮುತ್ತಲ ಗ್ರಾಮಗಳಲ್ಲಿ ನಡೆಸಿದ ಕ್ಷೇತ್ರಾಭಿವೃದ್ಧಿ ಪ್ರಯೋಗ, ತಮಿಳುನಾಡಿನ ಆಯ್ದ ಫಿರ್ಕಾ ಅಭಿವೃದ್ಧಿ ಯೋಜನೆ ಮಹಾರಾಷ್ಟ್ರದ ಸರ್ವೋದಯ ಯೋಜನೆ ಇವು ಗ್ರಾಮಸಮುದಾಯಗಳ ಅಭಿವೃದ್ಧಿಗಾಗಿ ಕೈಗೊಂಡ ಕೆಲವು ಪ್ರಯತ್ನಗಳು. ಈ ಎಲ್ಲ ಅನುಭವಗಳನ್ನೂ ಗಮನದಲ್ಲಿಟ್ಟುಕೊಂಡು ಒಂದನೆಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಗ್ರಾಮಗಳ ಸರ್ವಾಂಗೀಣ ಅಭ್ಯುದಯ ಸಾಧನೆಗಾಗಿ ಸಮುದಾಯ ಅಭಿವೃಧ್ಧಿ ಯೋಜನೆ ಉಪಕ್ರಮಿಸಲಾಯಿತು.

	ಸಮುದಾಯ ಅಭಿವೃದ್ಧಿಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತರುವಲ್ಲಿ ಭಾರತ ಮತ್ತು ಅಮೆರಿಕ ಸಂಯುಕ್ತಸಂಸ್ಥಾನಗಳ ನಡುವೆ ಆದ ತಾಂತ್ರಿಕ ಒಪ್ಪಂದ ಹಾಗೂ ಅದರೊಡನೆ ಒದಗಿಬಂದ ಹಣದ ನೆರವು ಸಹಾಯಕವಾಯಿತು. ಇದೇ ಕಾರ್ಯಕ್ಕಾಗಿ ಫೋರ್ಡ್ ಪ್ರತಿಷ್ಠಾನದಿಂದಲೂ ಸ್ವಲ್ಪ ಆರ್ಥಿಕ ನೆರವು ಬಂತು.

	ಸಮುದಾಯ ಅಭಿವೃದ್ಧಿ ಯೋಜನೆ 1952 ಅಕ್ಟೋಬರ್ 2ರಂದು ಗಾಂಧಿಜಯಂತಿಯ ದಿನ ಆರಂಭವಾಯಿತು. ಮೊದಲು ದೇಶದ ವಿವಿಧ ಭಾಗಗಳಲ್ಲಿ ಐವತ್ತೈದು ಸಮುದಾಯ ಅಭಿವೃದ್ಧಿ ಯೋಜನಾ ಕಾರ್ಯಕ್ರಮಗಳನ್ನು ಆರಂಭಿಸಲಾಯಿತು. ಒಂದೊಂದು ಸಮುದಾಯ ಅಭಿವೃದ್ಧಿ ಯೋಜನೆಯೂ ಸುಮಾರು ಮುನ್ನೂರು ಹಳ್ಳಿಗಳನ್ನು ಒಳಗೊಂಡಿತ್ತು. ಸುಮಾರು ಎರಡು ಲಕ್ಷ ಜನ ಅದರ ಕಕ್ಷೆಗೆ ಬಂದಿದ್ದರು. ಈ ಯೋಜನೆಯಲ್ಲಿ ವಿಶೇಷವಾಗಿ ಕೃಷಿ ಅಭಿವೃದ್ಧಿಗೆ ಗಮನ ನೀಡಲಾಗಿತ್ತು. ಜೊತೆಗೆ ಗ್ರಾಮೀಣ ಸಂಪರ್ಕಸಾಧನಗಳ ಅಭಿವೃದ್ಧಿ ನೀರಾವರಿ, ಸಾರ್ವಜನಿಕ ಆರೋಗ್ಯ, ಸಮಾಜಶಿಕ್ಷಣ, ಸಹಕಾರ, ಗ್ರಾಮಕೈಗಾರಿಕೆಗಳ ಪುರೋಭಿವೃದ್ಧಿ ಮುಂತಾದ ಗುರಿಗಳನ್ನು ಇಟ್ಟುಕೊಳ್ಳಲಾಗಿತ್ತು.

	1953ರಲ್ಲಿ ರಾಷ್ಟ್ರೀಯ ವಿಸ್ತರಣಯೋಜನೆ ಜಾರಿಗೆ ಬಂತು. ಈ ಯೋಜನೆಯ ಕಾರ್ಯಕ್ರಮ ಸಮುದಾಯ ಅಭಿವೃದ್ಧಿ ಯೋಜನೆಯಷ್ಟು ವ್ಯಾಪಕವಾಗಿರಲಿಲ್ಲ. ಪ್ರತಿಯೊಂದು ರಾಷ್ಟ್ರೀಯ ವಿಸ್ತರಣ ಕ್ಷೇತ್ರವೂ ಸುಮಾರು ಒಂದು ನೂರು ಹಳ್ಳಿಗಳನ್ನು ಒಳಗೊಂಡಿದ್ದು ಸುಮಾರು ತೊಂಬತ್ತು ಸಾವಿರ ಜನರಿಗೆ ವಿಸ್ತರಣ ಸೇವೆ ಒದಗಿಸುವ ಉದ್ದೇಶವಿತ್ತು. ಒಂದನೆಯ ಪಂಚವಾರ್ಷಿಕ ಯೋಜನೆ ಮುಗಿದಾಗ (1956) ಭಾರತದ ನಾಲ್ಕನೆಯ ಒಂದು ಭಾಗದ ಗ್ರಾಮಗಳು ಸಮುದಾಯ ಅಭಿವೃದ್ಧಿ ಯೋಜನೆ ಇಲ್ಲವೇ ರಾಷ್ಟ್ರೀಯ ವಿಸ್ತರಣ ಯೋಜನೆಯ ವ್ಯಾಪ್ತಿಗೆ ಒಳಗಾಗಿದ್ದುವು.

	ಸಮುದಾಯ ಅಭಿವೃದ್ಧಿ ಚಳವಳಿಯ ಪ್ರಗತಿಯನ್ನು ಅವಲೋಕಿಸಿ ಯುಕ್ತ ಸುಧಾರಣೆಗಳನ್ನು ಶಿಫಾರಸು ಮಾಡಲೆಂದು ಬಲವಂತರಾಯ್ ಮೆಹ್ತಾರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ಒಂದು ಅಧ್ಯಯನ ತಂಡ ನೇಮಿಸಿತು (1957). ಇದು ಅಲ್ಲಿಯತನಕ ಆಗಿದ್ದ ಸಮುದಾಯ ಅಭಿವೃದ್ಧಿ ಚಳವಳಿಯ ಸಾಧನೆಗಳನ್ನು ವಿಮರ್ಶಿಸಿತು ಮತ್ತು ಅದರ ವೈಫಲವನ್ನು ಗುರುತಿಸಿತು. ಕಣ್ಣಿಗೆ ಕಾಣುವಂಥ ಕೆಲವು ಸಾರ್ವಜನಿಕ ಕಾಮಗಾರಿ ಕೆಲಸಗಳನ್ನು ಮಾಡುವುದರಲ್ಲಿ ಹಾಗೂ ಕೆಲವು ಕಲ್ಯಾಣಕಾರಿ ಚಟುವಟಿಕೆಗಳನ್ನು ನಡೆಸುವುದರಲ್ಲಿ ಯಶಸ್ವಿಯಾಗಿದ್ದರೂ ಮೂಲಭೂತವಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ಜನರ ಸಹಕಾರ ರೂಢಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿತು. ಅಭಿವೃದ್ಧಿಕಾರ್ಯ ತಮ್ಮದು ಮತ್ತು ತಮಗಾಗಿ ಎಂಬ ಭಾವನೆ ಜನರಲ್ಲಿ ಮೂಡದ ಹೊರತು ಅವರ ಸಕ್ರಿಯ ಸಹಕಾರ ದೊರೆಯುವುದಿಲ್ಲವೆಂದು ಹೇಳಿತು. ಸಮುದಾಯ ಅಭಿವೃದ್ಧಿ ಚಳವಳಿ ಜನತಂತ್ರ ನಿಷ್ಠವಾಗಬೇಕು; ಅಭಿವೃದ್ಧಿಯೋಜನೆಗಳು ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಗೆ ಒಳಪಡಬೇಕು; ಅಂಥ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆ ಚುನಾಯಿತ ಜನತಾ ಪ್ರತಿನಿಧಿಗಳಿಂದ ಕೂಡಿದ ಸಂಸ್ಥೆಗಳಿಗೆ ಅಧೀನವಾಗಿರಬೇಕು ಎಂದು ಮೆಹ್ತಾ ಸಮಿತಿ ಶಿಫಾರಸು ಮಾಡಿತು.

	ಮೆಹ್ತಾ ಸಮಿತಿಯ ಶಿಫಾರಸುಗಳನ್ನು ರಾಷ್ಟ್ರೀಯ ಅಭಿವೃದ್ಧಿ ಮಂಡಲಿ ಒಪ್ಪಿತು. ರಾಜ್ಯಗಳಲ್ಲಿ ಮೂರು ಶ್ರೇಣಿಯ ಪಂಚಾಯಿತಿ ರಾಜ್ಯ ಸಂಸ್ಥೆಗಳು ರೂಪುಗೊಳ್ಳಬೇಕೆಂದೂ ಎಲ್ಲ ಅಭಿವೃದ್ಧಿಕಾರ್ಯಗಳೂ ಪಂಚಾಯಿತಿ ರಾಜ್ಯ ಸಂಸ್ಥೆಗಳ ಮೂಲಕ ನಡೆಯಬೇಕೆಂದೂ ತೀರ್ಮಾನವಾಯಿತು. ಸಮುದಾಯ ಅಭಿವೃದ್ಧಿ ಕ್ಷೇತ್ರ ಸಿಬ್ಬಂದಿ ಪಂಚಾಯಿತಿ ರಾಜ್ಯ ಸಂಸ್ಥೆಗಳ ನಿರ್ಧಾರಗಳನ್ನು ಕಾರ್ಯಗತಗೊಳಿಸುವ ಸಾಧನವಾಗಬೇಕೆಂದು ನಿರ್ಣಯವಾಯಿತು. ಈ ಮಹತ್ತರ ನಿರ್ಧಾರಗಳಿಗೆ ಅನುಗುಣವಾಗಿ ಎಲ್ಲ ರಾಜ್ಯಗಳಲ್ಲೂ ಪಂಚಾಯಿತಿ ರಾಜ್ಯ ಕಾನೂನು ಜಾರಿಗೆ ಬಂತು. ಚುನಾಯಿತ ಪಂಚಾಯಿತಿ ರಾಜ್ಯ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದುವು. ಜಿಲ್ಲಾಮಟ್ಟದಲ್ಲಿ ಜಿಲ್ಲಾ ಪರಿಷತ್ ಅಥವಾ ಜಿಲ್ಲಾಭಿವೃದ್ಧಿ ಮಂಡಲಿ, ತಾಲ್ಲೂಕು ಮಟ್ಟದಲ್ಲಿ ಪಂಚಾಯಿತಿ ಸಮಿತಿ ಅಥವಾ ತಾಲ್ಲೂಕು ಅಭಿವೃದ್ಧಿ ಮಂಡಲಿ ಮತ್ತು ಗ್ರಾಮಮಟ್ಟದಲ್ಲಿ ಗ್ರಾಮಪಂಚಾಯಿತಿ ಇವು ವಿಕೇಂದ್ರೀಕೃತ ವ್ಯವಸ್ಧೆಯ ಘಟಕಗಳಾದುವು.

	1957ಕ್ಕೆ ಹಿಂದೆ ಜಾರಿಯಲ್ಲಿದ್ದ ಸಮುದಾಯ ಯೋಜನೆ ಮತ್ತು ರಾಷ್ಟ್ರೀಯ ವಿಸ್ತರಣ ಯೋಜನೆ ಎಂಬ ಭೇದ ತಪ್ಪಿಸಿ ಎಲ್ಲ ಕಡೆಗಳಲ್ಲೂ ಸಮುದಾಯ ಅಭಿವೃದ್ಧಿಕ್ಷೇತ್ರ ರಚಿಸುವ ಕಾರ್ಯ 1958ರಿಂದ ಆರಂಭವಾಯಿತು. ಮೂರನೆಯ ಪಂಚವಾರ್ಷಿಕ ಯೋಜನೆ ಮುಗಿಯುವ ಹೊತ್ತಿಗೆ ದೇಶದ ಎಲ್ಲ ಆರು ಲಕ್ಷ ಹಳ್ಳಿಗಳೂ ಸಮುದಾಯ ಅಭಿವೃದ್ಧಿ ಕ್ಷೇತ್ರದ ವ್ಯಾಪ್ತಿಗೊಳಪಟ್ಟಿದ್ದುವು. 1977ರ ಏಪ್ರಿಲ್ 1ರಲ್ಲಿ ಭಾರತದಲ್ಲಿ ಒಟ್ಟು 5028 ಸಮುದಾಯ ಅಭಿವೃದ್ಧಿ ಕ್ಷೇತ್ರಗಳಿದ್ದು ಸುಮಾರು 46 ಕೋಟಿ 97 ಲಕ್ಷ ಜನ ಅವುಗಳ ವ್ಯಾಪ್ತಿಗೊಳಪಟ್ಟಿದ್ದರು. ಕರ್ನಾಟಕದಲ್ಲಿ ಒಟ್ಟು 175 ಸಮುದಾಯ ಅಭಿವೃದ್ಧಿಕ್ಷೇತ್ರಗಳಿದ್ದು ಅವುಗಳ ವ್ಯಾಪ್ತಿಯಲ್ಲಿ 29,800 ಗ್ರಾಮಗಳು ಸೇರಿದ್ದು ಸುಮಾರು 2 ಕೋಟಿ 40 ಲಕ್ಷ ಗ್ರಾಮೀಣ ಕ್ಷೇತ್ರಾಭಿವೃದ್ಧಿ ಯೋಜನೆಗೆ ಒಳಪಟ್ಟಿದರು.

	ಪ್ರತಿಯೊಂದು ಸಮುದಾಯ ಅಭಿವೃದ್ಧಿ ಕ್ಷೇತ್ರದ ವಿಸ್ತೀರ್ಣ ಸುಮಾರು 620 ಚಕಿಮೀ. ಇದು ಸುಮಾರು 110 ಹಳ್ಳಿಗಳನ್ನು ಒಳಗೊಂಡಿರುತ್ತದೆ. ಸುಮಾರು 92,000 ಜನ ಪ್ರತಿ ಕ್ಷೇತ್ರದ ವ್ಯಾಪ್ತಿಗೆ ಬರುತ್ತಾರೆ. ಅಭಿವೃದ್ಧಿ ಕಾರ್ಯವನ್ನು ಐದೈದು ವರ್ಷಗಳ ಎರಡು ಹಂತಗಳಲ್ಲಿ ಕೈಗೊಳ್ಳಲಾಗುವುದು. ಮೊದಲನೆಯ ಹಂತದಲ್ಲಿ ಸಮಗ್ರ ಗ್ರಾಮಾಭಿವೃದ್ಧಿಗೆ ಸರ್ವ ಕಾರ್ಯಕ್ರಮಗಳನ್ನು ಉಪಕ್ರಮಿಸಿ ಜಾರಿಗೆ ತರಲಾಗುವುದು. ಎರಡನೆಯ ಘಟ್ಟದಲ್ಲಿ ಅವನ್ನು ಸಂಘಟಿಸಲಾಗುವುದು. ಈ ಎರಡು ಹಂತಗಳಾದ ಮೇಲೆ ಅಭಿವೃದ್ಧಿ ಕಾರ್ಯಗಳು ತಂತಾವೇ ಮುಂದುವರಿಯುವ ಹಾಗೆ ನೋಡಿಕೊಳ್ಳಲಾಗುವುದು ಎಂದು ಆಶಿಸಲಾಗಿತ್ತು.

	ಮೂರನೆಯ ಪಂಚವಾರ್ಷಿಕ ಯೋಜನೆ ಮುಗಿಯುವತನಕ (1966) ಸಮುದಾಯ ಅಭಿವೃದ್ಧಿಗೆ ಸಂಬಂಧಿಸಿದ ಖರ್ಚನ್ನೆಲ್ಲ ಕೇಂದ್ರಸರ್ಕಾರವೇ ನಿರ್ವಹಿಸುತ್ತಿತ್ತು. ಆದರೆ ನಾಲ್ಕನೆಯ ಪಂಚವಾರ್ಷಿಕ ಯೋಜನೆಯ ಆರಂಭ ವರ್ಷದಿಂದ ಸಮುದಾಯ ಅಭಿವೃದ್ಧಿಗೆ ಸಂಬಂಧಿಸಿದ ಖರ್ಚನ್ನೆಲ್ಲ ರಾಜ್ಯ ಸರ್ಕಾರಗಳೇ ವಹಿಸುತ್ತ ಬಂದಿವೆ. ಸಮುದಾಯ ಅಭಿವೃದ್ಧಿ ಯೋಜನೆಗಳಿಗಾಗಿ ಮೊದಲ ಮೂರು ಪಂಚವಾರ್ಷಿಕ ಯೋಜನೆಗಳಲ್ಲಿ (1951-56) ರೂ 501 ಕೋಟಿ ಖರ್ಚಾಯಿತು. ಐದನೆಯ ಪಂಚವಾರ್ಷಿಕ ಯೋಜನೆಯ ಅವಧಿಗೆ ಸಮುದಾಯ ಅಭಿವೃದ್ಧಿ ಯೋಜನೆಯ ಮೇಲೆ ಮಾಡಿದ ಖರ್ಚು ರೂ 161 ಕೋಟಿ.

	ಸಮುದಾಯ ಅಭಿವೃದ್ಧಿ ಚಳವಳಿ ಆರಂಭವಾದ ಮೊದಲ ವರ್ಷಗಳಲ್ಲಿ ಅದಕ್ಕೆ ತುಂಬ ಪ್ರಾಶಸ್ತ್ಯವಿತ್ತು. ಕೇಂದ್ರ ಸರ್ಕಾರದಲ್ಲಿ ಸಮುದಾಯ ಅಭಿವೃದ್ಧಿ ಮತ್ತು ಸರ್ಕಾರಕ್ಕೆ ಒಂದು ಪ್ರತ್ಯೇಕ ಸಚಿವಾಲಯವೇ ಏರ್ಪಟ್ಟಿತ್ತು. ಆದರೆ ಕ್ರಮೇಣ ಅದರ ಪ್ರತಿಷ್ಠೆ ಕಡಿಮೆಯಾಗಿ ಅದು ಕೃಷಿ ಮತ್ತು ನೀರಾವರಿ ಸಚಿವಾಲಯದಲ್ಲಿ ಒಂದು ಶಾಖೆಯಾಗಿ ಪರಿವರ್ತಿತವಾಯಿತು. ಪುನಃ ಕೃಷಿ ಮತ್ತು ನೀರಾವರಿ ಸಚಿವಾಲಯದಲ್ಲಿರುವ ಗ್ರಾಮಾಭಿವೃದ್ಧಿ ಇಲಾಖೆಗೆ ಲಗತ್ತಾಯಿತು. ಕ್ಷೇತ್ರಮಟ್ಟದಲ್ಲಿ ಖರ್ಚಿನ ನಮೂನೆ ಹೇಗಿರಬೇಕುಂಬುದರ ನಿರ್ಧಾರ ಅದರ ಕಾರ್ಯಕ್ರಮವನ್ನು ಜಾರಿಗೆ ತರುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ಬಿಡಲಾಯಿತು.

	ಗ್ರಾಮಾಂತರ ಪ್ರದೇಶಗಳಲ್ಲಿ ಜನರಿಗೆ ಅನುಕೂಲವಾಗುವ ಕಾಮಗಾರಿಕೆಲಸಗಳು, ನೀರಾವರಿ ಅಭಿವೃದ್ಧಿ, ಕೃಷಿ, ಸಂವರ್ಧನೆ ಮತ್ತು ಅಭ್ಯುದಯಕ್ಕೆ ಸಾಧಕವಾಗುವ ಸಂಘ ಸಂಸ್ಥೆಗಳ ನಿರ್ಮಾಣ-ಈ ಕ್ಷೇತ್ರಗಳಲ್ಲಿ ಕೆಲವು ಸಾಧನೆಗಳನ್ನು ಗುರುತಿಸಬಹುದು. ಗ್ರಾಮಾಂತರ ರಸ್ತೆಗಳ ನಿರ್ಮಾಣ, ಸೇತುವೆಗಳ ದುರಸ್ತು ಅಥವಾ ಹೊಸ ಸೇತುವೆಗಳನ್ನು ಕಟ್ಟಿಸುವುದು, ಗ್ರಾಮೀಣ ವೈದ್ಯಶಾಲೆ, ಶಿಕ್ಷಣ ಕೇಂದ್ರ, ಸಮುದಾಯಭವನ ಮುಂತಾದವುಗಳಿಗೆ ಅಗತ್ಯವಾದ ಕಟ್ಟಡಗಳನ್ನು ನಿರ್ಮಿಸುವುದು, ಕುಡಿಯುವ ನೀರಿನ ಬಾವಿಗಳನ್ನು ತೋಡಿಸುವುದು, ಹರಿಜನ ಗಿರಿಜನರಿಗೆ ಮನೆಗಳನ್ನು ಕಟ್ಟಿಸಿಕೊಡುವುದು ಇತ್ಯಾದಿ ನಿರ್ಮಾಣ ಕಾರ್ಯಕ್ರಮಗಳನ್ನು ಕೈಗೊಂಡು ಪೂರೈಸಲಾಗಿದೆ. ಸಣ್ಣ ನೀರಾವರಿ ಯೋಜನೆಗಳನ್ನು ಕಾರ್ಯಗತ ಮಾಡಿ ಕೃಷಿಗೆ ಅಗತ್ಯವಾದ ಪೋಷಣೆ ನೀಡಲಾಗಿದೆ. ಕೃಷಿ ಕ್ಷೇತ್ರದಲ್ಲಿ ಹೊಸ ತಳಿಗಳ ಪ್ರಯೋಗ, ರಸಗೊಬ್ಬರಗಳ ವ್ಯಾಪಕ ಉಪಯೋಗ, ಆಧುನಿಕ ಬೇಸಾಯ ಪದ್ಧತಿಗಳ ಪ್ರಚಾರ ಇತ್ಯಾದಿ ಉಪಯುಕ್ತ ಕಾರ್ಯಗಳನ್ನು ಕೈಕೊಳ್ಳಲಾಗಿದೆ. ಇದರಿಂದ ಭಾರತದಲ್ಲಿ ಆಹಾರಧಾನ್ಯಗಳ ಉತ್ಪಾದನೆ ದ್ವಿಗುಣಗೊಳ್ಳಲು ಸಾಧ್ಯವಾಗಿದೆ. ಗ್ರಾಮಾಭಿವೃದ್ಧಿಗೆ ಸಹಾಯಕವಾಗುವ ಸಂಘ ಸಂಸ್ಥೆಗಳು, ಸಹಕಾರ ಸಂಘಗಳು ವಿಕಾಸ ಮಂಡಲಗಳು, ಕುಶಲ ಕಾರ್ಮಿಕರ ತರಬೇತಿ ಸಂಸ್ಥೆಗಳು ಇತ್ಯಾದಿ ಬಹಳವಾಗಿ ಬೆಳೆದಿದೆ. ಇವೆಲ್ಲ ಸಮುದಾಯ ಅಭಿವೃದ್ಧಿ ಚಳವಳಿಯ ಸಾಧನೆಗಳು ಎಂದು ಹೇಳಬಹುದು.

	ಅಭಿವೃದ್ಧಿ ಕಾರ್ಯವನ್ನು ಜನತಂತ್ರನಿಷ್ಠವಾಗಿ ಮಾಡುವ ಉದ್ದೇಶದಿಂದ ಪಂಚಾಯಿತಿ ರಾಜ್ಯ ಸಂಸ್ಥೆಗಳನ್ನು ಜಾರಿಗೆ ತರಲಾಯಿತು. 1959-64 ಅವಧಿಯಲ್ಲಿ ಚೈತನ್ಯಪೂರ್ಣವಾಗಿ ಬೆಳೆದ ಪಂಚಾಯಿತಿ ರಾಜ್ಯ ಸಂಸ್ಥೆಗಳು ಅಲ್ಲಿಂದೀಚೆಗೆ ಸ್ಥಗಿತಗೊಂಡು ಇಳಿಮುಖವಾಗುತ್ತ ಬಂದಿವೆ. ಇವುಗಳಿಗೆ ಸಾಕಷ್ಟು ಹಣಕಾಸಿನ ಬಲ ಇಲ್ಲ. ಯುಕ್ತ ಅಧಿಕಾರವೂ ಇಲ್ಲ. ಹೀಗಾಗಿ ಇವು ಕೃಶವಾಗಿವೆ. ಕ್ಲುಪ್ತಕಾಲದಲ್ಲಿ ಈ ಸಂಸ್ಥೆಗಳಿಗೆ ಚುನಾವಣೆಗಳೂ ನಡೆಯುತ್ತಿಲ್ಲ. ಪದಾಧಿಕಾರಿಗಳು ಸಾಮಾನ್ಯವಾಗಿ ಮೇಲ್ವರ್ಗ ಜಾತಿಗಳಿಗೆ ಸೇರಿದ್ದು ಅವರ ಹಿತಗಳ ಸಂವರ್ಧನೆಯೇ ಕಂಡುಬರುತ್ತಿದೆ. ಪಂಚಾಯಿತಿ ರಾಜ್ಯಗಳು ದುರ್ಬಲವಾಗಿ ಇರುವುದರಿಂದ ಸಮುದಾಯ ಅಭಿವೃದ್ಧಿ ಕ್ಷೇತ್ರದ ಆಡಳಿತದಲ್ಲಿ ಅಧಿಕರಶಾಹಿಯದೇ ಮೇಲುಗೈ ಆಗಿ ಅಭಿವೃದ್ಧಿ ಕಾರ್ಯಗಳ ಜನತಂತ್ರೀಕರಣ ಆಗಲಿಲ್ಲ. ಇದೊಂದು ದೊಡ್ಡ ವೈಫಲ್ಯ.

	ಸಮುದಾಯ ಅಭಿವೃದ್ಧಿ ಕ್ಷೇತ್ರದ ಕಾರ್ಯಕ್ರಮಗಳ ಪ್ರಯೋಜನ ದೊಡ್ಡ ಮತ್ತು ಮಧ್ಯಮವರ್ಗದ ರೈತರಿಗೆ ಹಾಗೂ ಗ್ರಾಮದ ಇತರ ಉನ್ನತವರ್ಗಗಳ ಜನರಿಗೇ ಆಗಿದೆ ಎಂಬ ಭಾವನೆ ದಟ್ಟವಾಗಿ ಮೂಡಿದೆ. ಬಹುಸಂಖ್ಯಾತವಾಗಿರುವ ಸಣ್ಣ ಮತ್ತು ಸೀಮಾಂತ ರೈತರಿಗೂ ಕೃಷಿ ಕಾರ್ಮಿಕರಿಗೂ ಕುಶಲಕರ್ಮಿಗಳಿಗೂ ಆಗಿರುವ ಪ್ರಯೋಜನ ತೀರ ಕಡಿಮೆ ಎಂಬುದು ಎಲ್ಲ ಮೌಲ್ಯಮಾಪನ ವರದಿಗಳಿಂದಲೂ ಸ್ಪಷ್ಟವಾಗಿದೆ. ಅನೇಕ ರೀತಿಯ ಸಾಮಾಜಿಕ ಮತ್ತು ಆರ್ಥಿಕ ಅನ್ಯಾಯ ಮತ್ತು ಅಸಮಾನತೆಗಳಿಂದ ಛಿದ್ರವಾಗಿರುವ ಗ್ರಾಮೀಣ ಸಮಾಜದಲ್ಲಿ ಸಾಮಾನ್ಯ ಹಿತಕ್ಕಾಗಿ ಕೆಲಸಮಾಡಲು ಸಾಧ್ಯವಿಲ್ಲ. ಈ ಮೂಲಭೂತ ಕಾರಣದಿಂದ ಸಮುದಾಯ ಅಭಿವೃದ್ಧಿ ಚಳವಳಿ ನಿರೀಕ್ಷಿತ ಯಶಸ್ಸು ಪಡೆಯಲಿಲ್ಲ. ಈಚೆಗೆ ಜಾರಿಗೆ ಬಂದಿರುವ ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ ಬ್ಯಾಂಕುಗಳು ಹಾಗೂ ಇತರ ಸಂಸ್ಥೆಗಳ ನೆರವಿನಿಂದ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿವೆ. 				
(ಬಿ.ಅರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ